30-May-2013
ನಮ್ಮ ವಚನ- ಬಹುವಚನ
ಚುಕ್ಕುಬುಕ್ಕು

ಮಿಲೇ ಸುರ್‌ ಮೇರಾ ತುಮ್ಹಾರಾ ಹಾಡಿಗೆ ಮನಸೋತ ನಮಗೆಲ್ಲ ಕನ್ನಡದ್ದೇ ಅಂಥದ್ದೊಂದು ಗೀತೆ ಇದ್ದರೆ ಚೆಂದ ಅನಿಸಿತ್ತಲ್ಲವೆ? ಅಂಥದು ಎನ್ನಬಹುದಾದ ಒಳ್ಳೆಯ ಪ್ರಯತ್ನವೊಂದು ಇಲ್ಲಿದೆ.

ಕವಿ ಜಯಂತ ಕಾಯ್ಕಿಣಿ ಬರೆದ ಈ ಹಾಡಿನಲ್ಲಿ ನಮ್ಮ ಅನೇಕ ಕನ್ನಡಾಭಿಮಾನದ ಚಿತ್ರಗೀತೆಗಳಂತೆ ಹುಸಿ ಆವೇಶ, ಅಬ್ಬರಗಳಿಲ್ಲ, ‘ಕಾವೇರಿ’ ‘ಕಸ್ತೂರಿ’ಯಂಥ ಸವೆದ ಪದಗಳ ಸುಳಿವಿಲ್ಲ. 'ನಮ್ಮ ವಚನ- ಬಹುವಚನ',  'ಕನಸಿನ ಕಾಲುದಾರಿ ಕನ್ನಡ, ಮಮತೆಯ ರಾಯಭಾರಿ ಕನ್ನಡ, ಪೊರೆಯುವ ತಾಯಿಬೇರು ಕನ್ನಡ, ನಮ್ಮ ನುಡಿಯಿಂದಲೇ ನಮಗೆ ತ್ರಾಣ, ಹಂಚಿಕೊಂಡ ಬುತ್ತಿಯ ಬೀಡು’, ‘ವಿನಿಮಯ ಕನ್ನಡ, ವಿನಯವೇ ಕನ್ನಡ’, ‘ಪ್ರತಿಭೆಯೆ ಕನ್ನಡ, ಪ್ರತಿಫಲ ಕನ್ನಡ’- ಹೀಗೆ ಹೊಸತನ ಸೂಸುವ ಹಲವು ಸಾಲುಗಳು ಇಲ್ಲಿವೆ.

ವರ್ತಮಾನದ ಕನ್ನಡ ಬಿಂಬಗಳನ್ನಿಟ್ಟುಕೊಂಡು ಬರೆದ  ತಾಜಾ ಹಾಡಿಗೆ ದೃಶ್ಯೀಕರಣದ ವೇಳೆಗೆ ಅಲ್ಲಲ್ಲಿ ಮತ್ತವೇ ಹಳೆಯ ಚಿತ್ರಿಕೆಗಳು ಸೇರಿಕೊಂಡಿರುವುದು ನಿಜವಾದರೂ ಈ ವೀಡಿಯೋ ಒಟ್ಟಾರೆಯಾಗಿ ಇಷ್ಟವಾಗುತ್ತದೆ. ಎಸ್‌ಪಿ ಬಾಲಸುಬ್ರಮಣ್ಯಂ, ಬಿ ಜಯಶ್ರೀ, ಫಯಾಜ್‌ ಖಾನ್‌, ವಿಜಯಪ್ರಕಾಶ್‌, ಕವಿತಾ ಕೃಷ್ಣಮೂರ್ತಿ ಸೇರಿದಂತೆ ಹಲವು ಕನ್ನಡದ ಮತ್ತು ಹೊರಗಿನ ಗಾಯಕರು ಇದನ್ನು ಮನದುಂಬಿ ಹಾಡಿದ್ದಾರೆ.

ಈ `ಕನ್ನಡ ಗೀತೆ'ಯ ನಿರ್ದೇಶನ ಅಜಯ್‌ಕುಮಾರ್‌ ಅವರದು. ಪರಿಕಲ್ಪನೆ: ಮಾಯಾಚಂದ್ರ. ಸಂಗೀತ: ಅಭಿಜಿತ್‌ ಶೈಲಂತ್‌, ಕ್ಯಾಮೆರಾ: ವಿ ಕೆ ಸುಭಾಷ್‌.

ಶೇರ್ ಮಾಡಿ
ನಿಮ್ಮ ಅನಿಸಿಕೆ ತಿಳಿಸಿ
ಪ್ರಮೋದ್ May 31, 2013 at 10:28am
ಉತ್ತಮ ಪ್ರಯತ್ನ. ಏನೋ ಕೊರತೆ ಇದೆ. ಶ್ರೀನಿಧಿಯವರು ಹೇಳಿದ೦ತೆ ಹಲವು ಕನ್ನಡತನ ಕಾಣಿಸುತ್ತಿಲ್ಲ.  ಕನ್ನಡಿಗರ ತಿ೦ಡಿ ತಿನಸು, ಸಮಗ್ರ ಕರ್ನಾಟಕ ಕಾಣುತಿಲ್ಲ. ನ್ಯೂಸ್ ಚಾನೆಲ್ ಗಳ ಸವಕಲು ಪದ "ಒಟ್ಟಾರೆಯಾಗಿ" ಬಳಸಿದ್ದು ಲೇಖನದ ಅ೦ದವನ್ನೇ ಕೆಡಿಸಿಬಿಟ್ಟಿದೆ.
ಸಿರಿ May 31, 2013 at 11:59am
ತುಂಬಾ ಸಾಧಾರಣ ಅನ್ನಿಸ್ತು. ಪ್ರಚಾರ ಜಾಸ್ತಿ . ಸಂಗೀತ, ಸಾಹಿತ್ಯ ಅಷ್ಟ ಕ್ಕಷ್ಟೇ.

ಉತ್ಸಾಹ ಸೂಸುವ ಬೇರೆ ರಾಗವನ್ನು ಅಳವಡಿಸಿಕೊಳಬಹುದಿತ್ತು . ಸಿರಿ.
suruchi May 31, 2013 at 6:29pm
sakath kushi kodo haadu

gopal June 01, 2013 at 6:15am
ಸಂಗೀತ - ಸಾಹಿತ್ಯ ಇಷ್ಟವಾಯಿತು.. ಆದರೆ ಚಿತ್ರೀಕರಣದಲ್ಲಿ ಕನ್ನಡತನ ಮರೆಯಾಗಿದೆ. ಕನ್ನಡ ಎಂದರೆ ತಟ್ಟನೆ ನೆನಪಾಗುವ ರಾಜ್‌ಕುಮಾರ್, ವಿಶ್ವೇಶ್ವರೈಯ್ಯ ಒಂದು ಫೋಟೋಗಷ್ಟೆ ಸೀಮಿತವಾಗಿದ್ದಾರೆ..
ಪ್ರಚಾರಕ್ಕೆಂದೇ ಮಾಡಿರುವ ವೀಡಿಯೋ "ಕನ್ನಡ" ತನವನ್ನು ಪೂರ್ಣವಾಗಿ ಹಿಡಿದಿಡುವಲ್ಲಿ ವಿಫಲವಾಗಿದೆ.
ನಿರ್ದೇಶಕರು ಇನ್ನಷ್ಟು ಹೋಮ್ ವರ್ಕ್ ಮಾಡಿಕೊಳ್ಳಬೇಕಿತ್ತು.
ಶ್ರೀ June 02, 2013 at 8:13pm
ಶ್ರೀನಿಧಿ ಹೇಳಿದ್ದಕ್ಕೆ ೧೦೦% ಸಮ್ಮತ! ಎಸ್ಪಿಬಿ ಆದ್ರೂ ಕನ್ನಡದಲ್ಲಿ ಕೆಲಸ ಮಾಡಿ ನಮ್ಮವರಾಗಿರೋವ್ರು. ಇದರಲ್ಲಿರೋ ಇತರ ಕೆಲವು ಕಲಾವಿದರ ಬಗ್ಗೆ ಈ ಮಾತು ಕೂಡ ಹೇಳೋಕಾಗಲ್ಲ. ಕನ್ನಡದವರು ಅಂದ್ರೆ ಹೆಮ್ಮೆಯಾಗುವಂಥ ವ್ಯಕ್ತಿಗಳನ್ನೆಲ್ಲ ಮರೆತು ಒಂದೇ ವರ್ತುಲದ ಕೆಲವು ಕಲಾವಿದರನ್ನಷ್ಟೇ ಬಳಸಿಕೊಂಡಿರುವ ತುಂಬಾ ಸಾಧಾರಣ ಪ್ರಯತ್ನ ಅನ್ನಿಸಿತು. ಎಲ್ಲೋ 'ಕನ್ನಡ'ವನ್ನ ಒಂದು ಸೆಲ್ಲಿಂಗ್ ಕಾನ್ಸೆಪ್ಟ್ ಅನ್ನೋ ಕಾರಣಕ್ಕಷ್ಟೇ ಬಳಸಿದ್ದಾರೆನೋ ಅನ್ನುವ ಗುಮಾನಿ ಬರುವಷ್ಟು ಹೋಂವರ್ಕ್ ಕಡಿಮೆಯಾಗಿದೆ :(
ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
ಬಸವರಾಜ ಸೂಳಿಬಾವಿ
ಸಿಡಿಲು ಮರಿ
ಗಣಪತಿ ಮೊಳೆಯಾರ
(10)
(11)
(9)